ಗಾಂಧಿ-ಅಂಬೇಡ್ಕರ್‌ರ ಮುಖಾಮುಖಿ!

Homeಅಂಕಣ

ಗಾಂಧಿ-ಅಂಬೇಡ್ಕರ್‌ರ ಮುಖಾಮುಖಿ!

ಏಶಿಯಾದ ಬೆಳಕು ಎಂದೇ ಕರೆಯಲಾಗುವಬುದ್ಧನನ್ನು ಜಗತ್ತಿಗೆ ನೀಡಿದ್ದೇವೆ, ಆದರೆ ಇಬ್ಬರು ಮಹಾನ್ ಭಾರತೀಯರು ಸಹ ಜಗತ್ತಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಮ

ನಾಗಾರ್ಜುನ ಯಾರು?
ಮಹಾರಾಷ್ಟ್ರದ ದಲಿತ ಚಳುವಳಿಯಲ್ಲಿ ಇತಿಹಾಸವಾಗಿ ಉಳಿದ “ನಾಮಾಂತರ ಚಳುವಳಿ”
BBL: 14 ಎಸೆತಗಳಲ್ಲಿ 76 ರನ್..! ಮ್ಯಾಕ್ಸ್‌ವೆಲ್ ಕೈಬಿಟ್ಟು ತಪ್ಪು ಮಾಡ್ತಾ ಆರ್​ಸಿಬಿ?
ಏಶಿಯಾದ ಬೆಳಕು ಎಂದೇ ಕರೆಯಲಾಗುವಬುದ್ಧನನ್ನು ಜಗತ್ತಿಗೆ ನೀಡಿದ್ದೇವೆ, ಆದರೆ ಇಬ್ಬರು ಮಹಾನ್ ಭಾರತೀಯರು ಸಹ ಜಗತ್ತಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಮೋಹನದಾಸ ಕರಮಚಂದ ಗಾಂಧಿ, ಸಂವಿಧಾನದ ಶಿಲ್ಪಿ ಡಾ. ಅಂಬೇಡ್ಕರ್ ಅವರು ತಮ್ಮ ಅಪಾರ ಜ್ಞಾನಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಆದರೆ ಗಾಂಧೀಜಿ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹ ಕ್ರಿಯೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಬಾಬಾಸಾಹೇಬರ ಚಿಂತನೆಗಳಿಂದ ಪಡೆದ ಸ್ಫೂರ್ತಿ ದಿನದಿಂದ ದಿನಕ್ಕೆ ಭರವಸೆಯ ಮೂಲವಾಗುತ್ತಿದೆ.
ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಘರ್ಷಣೆಗಳು ಹುಟ್ಟಿಕೊಂಡಲ್ಲೆಲ್ಲಾ, ಜನರು ಬಾಬಾಸಾಹೇಬರ ಚಿತ್ರವನ್ನು ತಮ್ಮ ಕೈಯಲ್ಲಿ ಹಿಡಿದು ತಮ್ಮ ಇರುವು ಸಾಬೀತುಪಡಿಸಲು ಹೆಣಗುತ್ತಿದ್ದಾರೆ. ಗುಜರಾತ್‌ನ ಉನ್ನಾವೊಂದರಲ್ಲಿ ದಲಿತರು ದೌರ್ಜನ್ಯಕ್ಕೆ ಒಳಗಾಗಿದ್ದರು. ಈ ಹೋರಾಟದಲ್ಲಿ, ಜನರು ತಮ್ಮ ಕೈಯಲ್ಲಿ ಬಾಬಾಸಾಹೇಬರ ಚಿತ್ರವನ್ನು ದೃಢವಾಗಿ ಹಿಡಿದಿದ್ದರು ಮತ್ತು ಅವರ ಧ್ವನಿಯಲ್ಲಿ ‘ಜೈಭೀಮ್’ ಘೋಷಣೆ ಗಟ್ಟಿಯಾಗಿ ಪ್ರತಿಧ್ವನಿಸಿತು.
ಬಾಬಾಸಾಹೇಬ್ ಎಲ್ಲೆಡೆ ವ್ಯಾಪಕವಾಗಿದ್ದರು. ಅದು ರಾಷ್ಟ್ರೀಯತೆಯ ವಿಷಯವಾಗಿರಲಿ ಅಥವಾ ದೇಶಾದ್ಯಂತ ರೈತ ಚಳವಳಿಯಾಗಲಿ; ಎಲ್ಲಾ ಸಮಯದಲ್ಲೂ ಗಾಂಧೀ ಹಾಗೂ ಅಂಬೇಡ್ಕರವರ ಭಾವಚಿತ್ರಗಳು ವ್ಯವಸ್ಥೆ ವಿರೋಧಿ ಚಳುವಳಿಗಾರರೊಂದಿಗೆ ಇದ್ದವು. ವಾಸ್ತವ ಹೀಗಿದ್ದರೆ, ಗಾಂಧಿ ಮತ್ತು ಅಂಬೇಡ್ಕರ್ ಪರಸ್ಪರ ಪೂರಕವಾಗಿದ್ದಾರೆಯೇ ಅಥವಾ ವಿರೋಧಿಗಳೇ? ಅವರು ವಿರೋಧಿ ಗಳಾಗಿದ್ದರೆ ಏಕೆ? ಇಬ್ಬರ ನಡುವಿನ ಸಾಮಾನ್ಯ ಸಾಮ್ಯತೆ ಏನು? ಭಿನ್ನತೆ ಏನು? ಅಂಬೇಡ್ಕರ್ ಜಯಂತಿಯ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಪರಿಶೀಲಿಸಲು ಈ ಲೇಖನದಲ್ಲಿ ಯತ್ನಿಸಲಾಗಿದೆ.
ಗಾಂಧೀಜಿ ಶ್ರೀಮಂತ ವೈಶ್ಯ ಸಮುದಾಯದ ವ್ಯಕ್ತಿ. ವಿದೇಶಕ್ಕೆ ಫುಲ್ ಸೂಟಿನಲ್ಲಿ ಹೋಗಿದ್ದ ಗಾಂಧೀಜಿ ಭಾರತಕ್ಕೆ ಬಂದ ಮೇಲೆ ಬಡ, ನಿರ್ಗತಿಕ, ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದವ ರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡರು. ಅರೆಬೆತ್ತಲೇ ಫಕೀರನಾಗಿ ಹೋರಾಡಿದರು. ಇದು ಅಷ್ಟು ಸುಲಭವಾದ ಪರಿವರ್ತನೆಯೇನಲ್ಲ. ಅದರ ಹಿಂದೆ ಸುದೀರ್ಘವಾದೊಂದು ಹಿನ್ನೆಲೆ ಇದೆ. ಇದು ಕೇವಲ ಸರಳತೆ ಪ್ರಶ್ನೆಯಲ್ಲ. ಇದು ಕೇವಲ ಸರಳ ಜೀವನ, ಉನ್ನತ ಚಿಂತನೆ ಮಾತ್ರವಲ್ಲ, ಅದು ಜನಸಾಮಾನ್ಯರ ಮೇಲೆ ಮತ್ತು ಸ್ವತಃ ಅವರ ಮೇಲೆ ಅಗಾಧವಾದ ಪ್ರಭಾವ ಬೀರಿದ ಸಂಗತಿ. ಇದು ಆಧ್ಯಾತ್ಮಿಕ ಆಯಾಮವನ್ನು ಹೊಂದಿದೆ. ಗಾಂಧೀಜಿಯವರು ಸರಳತೆಗಾಗಿ ಮೆಚ್ಚುಗೆ ಪಡೆದಿದ್ದರು. ಆದರೆ ಸರಳವಾಗಿರುವುದು ತಪಸ್ಸು ಮತ್ತು ಸಮರ್ಪಣೆ. ಗಾಂಧೀಜಿ ಜನರೊಂದಿಗೆ ಬೆರೆಯುವ ಪರಿ ಅಚ್ಚರಿಯನ್ನುಂಟುಮಾಡುತ್ತದೆ.
ಇನ್ನೊಂದೆಡೆ ಡಾ. ಅಂಬೇಡ್ಕರ ತನ್ನೆಲ್ಲಾ ಅವಹೇಳನ, ಅವಮಾನ, ತುಚ್ಛಿಕರಣ ಮತ್ತು ಗೆಟ್ಟೋ-ಮಹಾರವಾಡದ ಅನುಭವ ಮತ್ತು ಎಲ್ಲ ಇಲ್ಲಗಳ ಮಧ್ಯ ವಿದೇಶಕ್ಕೆ ಹೋಗಿ ಫುಲ್ ಸೂಟಿನೊಂದಿಗೆ ಹಿಂದಿರುಗಿ ಬಂದು ತನ್ನ ಶೋಷಿತ ಜನರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದ್ದೆ ಅವರ ಹೆಗ್ಗಳಿಕೆ. ಎಲ್ಲ ಕೊರತೆಗಳ ನಡುವೆಯೂ ತನ್ನ ಸತತ ಪ್ರಯತ್ನ, ಪರಿಶ್ರಮ, ದೃಢಸಂಕಲ್ಪ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಹೋರಾಟದಿಂದ ತನ್ನ ಶೋಷಿತ ಸಮುದಾಯಕ್ಕೆ ಅಸ್ಮಿತೆ ತಂದು ಕೊಟ್ಟದ್ದು ಸರಳವಾದ ಕೆಲಸವೇನಲ್ಲ. ಡಾ. ಅಂಬೇಡ್ಕರ ಹಾಗೆ ಮಾಡಿದ್ದು ನಾವು ಯಾರಿಗೂ ಕಡಿಮೆ ಇಲ್ಲವೆಂದು ನಿರೂಪಿಸಿದ್ದು ಐತಿಹಾಸಿಕ ಅಗತ್ಯವಾಗಿತ್ತು.
ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ, ಗಾಂಧಿಯವರು ಫೆಬ್ರವರಿ ೧೯೧೬ರಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಮೊದಲು – ವ್ಯಕ್ತಪಡಿಸಿದರು. ಡಾ. ಅಂಬೇಡ್ಕರ್ ಅವರು ಮೇ ೧೯೧೬ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಭಾರತದಲ್ಲಿ ಜಾತಿಗಳು: ಅವುಗಳ ಕಾರ್ಯತಂತ್ರ, ಹುಟ್ಟು ಮತ್ತು ಬೆಳವಣಿಗೆ’ ವಿಷಯದ ಮೇಲೆ ಒಂದು ಪ್ರಬಂಧವನ್ನು ಓದಿದರು. ಇದು ಡಾ. ಅಂಬೇಡ್ಕರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ನೀಡಿದ ಮೊದಲ ಭಾಷಣ ಆಗಿತ್ತು. ಗಾಂಧೀಜಿ ದೇಶದ ಸ್ವಾತಂತ್ರ‍್ಯದ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅಂಬೇಡ್ಕರ್ ಜಾತಿ ವ್ಯವಸ್ಥೆಯಿಂದ ಮುಕ್ತವಾದ ಸ್ವಾತಂತ್ರ‍್ಯವನ್ನು ಬಯಸಿದ್ದರು.
ಗಾಂಧಿ-ಅಂಬೇಡ್ಕರ್ ವಿವಾದವು ಅಸ್ಪೃಶ್ಯತೆಯ ವಿಷಯದೊಂದಿಗೆ ಪ್ರಾರಂಭವಾಯಿತು, ಆ ಸಮಯದಲ್ಲಿ ಗಾಂಧಿಯವರು ಪ್ರಭಾವಿ ವ್ಯಕ್ತಿಯಾಗಿದ್ದರು ಮತ್ತು ಕಾಂಗ್ರೆಸ್ ಮೇಲೂ ಪ್ರಭಾವ ಬೀರಿದ್ದರು. ಆಗಿನ ಸಂದರ್ಭದಲ್ಲಿ ದೇಶದ ಸಾಮಾಜಿಕ -ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಗಾಂಧಿಯವರು ಪ್ರಭಾವಿಸುತ್ತಿದ್ದರು. ಆದಾಗ್ಯೂ, ಗಾಂಧಿಯವರು ಹೇಗೆ ಕಾಂಗ್ರೆಸ್ ಚಟುವಟಿಕೆಗಳಿಗೆ ಸಂಬAಧಿಸಿದAತೆ ಪರಿಣಾಮಕಾರಿ ನಿರ್ಣಯ ತೆಗೆದುಕೊಳ್ಳುತ್ತಿದ್ದರೋ ಹಾಗೆ ಆಸ್ಪೃಶ್ಯತೆಗೆ ಸಂಬAಧಿಸಿದAತೆ ನಿರ್ಣಾಯಕ ಕಾರ್ಯಕ್ರಮ ಹೊಂದಿರಲಿಲ್ಲ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟರು. ಗಾಂಧಿ ಮತ್ತು ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ವಿಷಯದಲ್ಲಿ ಭಿನ್ನರಾಗಿದ್ದರು. ಏಕೆಂದರೆ ಅವರ ಅನುಭವಗಳು ವಿಭಿನ್ನವಾಗಿವೆ.
ಗಾಂಧೀಜಿ ಮತ್ತು ಅಂಬೇಡ್ಕರರ ನಡುವಿನ ತಾತ್ವಿಕ ಚರ್ಚೆಯನ್ನು ಮುನ್ನೆಲೆಗೆ ತರಲಾಗುತ್ತಿದೆ. ಈ ಇಬ್ಬರೂ ಭಾರತವೆಂಬ ಹರಿದು ಹಂಚಲ್ಪಟ್ಟಿದ್ದ ದೇಶವನ್ನು ಅತ್ಯಂತ ಪರಿಶ್ರಮದಿಂದ ಕಟ್ಟಿದ ನವಭಾರತ ನಿರ್ಮಾಪಕರಾಗಿದ್ದಾರೆ. ಸ್ವಾತಂತ್ರ‍್ಯ ಬಂದ ತರುವಾಯ ದೇಶದ ಪರಿಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ಬಡತನ, ನಿರಕ್ಷರತೆ, ಕೋಮುಗಲಭೆ, ದೇಶದ ವಿಭಜನೆಯ ಸಂಘರ್ಷಮಯ ವಾತಾವರಣ. ಆರ್ಥಿಕ ವಲಯದ ಕುಸಿತ, ಅತಂತ್ರತೆ, ಸಂಪ್ರದಾಯಶೀಲತೆಯನ್ನು ಕಳಚಿ ಸ್ವತಂತ್ರ, ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಸ್ಥಾಪನೆ ಮತ್ತು ಜಾತಿ, ಕೋಮು, ಮತ ಮತ್ತು ಲಿಂಗ ಆಧಾರಿತ ತಾರತಮ್ಯಗಳನ್ನು ಅಳಿಸಿ ಸಮಾನತೆ, ಭ್ರಾತೃತ್ವ, ಸ್ವಾತಂತ್ರ‍್ಯದ ತತ್ವಗಳ ಮೇಲೆ ಭಾರತ ನಿರ್ಮಾಣ ಮಾಡುವ ಸವಾಲು ದೇಶದ ಮುಂದೆ ಇತ್ತು. ಅಂತಹ ಸಂಕ್ರಮಣ ಮತ್ತು ಸಂಘರ್ಷಮಯ ಪರಿಸ್ಥಿತಿಯಲ್ಲಿ ಈ ಇಬ್ಬರೂ ನಾಯಕರು ನಿರ್ವಹಿಸಿದ ಪಾತ್ರ ನಿಜಕ್ಕೂ ಐತಿಹಾಸಿಕವಾದುದು.
ಗಾಂಧೀಜಿಯವರು ಎಲ್ಲ ಸೌಲಭ್ಯ ಮತ್ತು ಸೌಕರ್ಯಗಳ ಮಧ್ಯೆ ಸೌಹಾರ್ದಯುತ ವಾತಾವರಣದಲ್ಲಿ ಜನಿಸಿದರು. ಅವರು ಅಸ್ಪೃಶ್ಯತೆಯನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುತ್ತಿದ್ದರು. ಅದನ್ನು ಸಮಾಜೋ-ರಾಜಕೀಯ ನೆಲೆಯಲ್ಲಿ ಗಾಂಧೀ ವಿಶ್ಲೇಷಿಸಲಿಲ್ಲ. ಮತ್ತೊಂದೆಡೆ, ಅಂಬೇಡ್ಕರ್ ಅಸ್ಪೃಶ್ಯ ಮಹಾರ ಜಾತಿಯಲ್ಲಿ ಜನಿಸಿದ್ದರಿಂದ ಜಾತಿ ಅವಮಾನದ ಅಸಹನೀಯ ನೋವನ್ನು ಅನುಭವಿಸಬೇಕಾಯಿತು. ಜಾತಿ ಭೇದ ಮತ್ತು ಅಸ್ಪೃಶ್ಯತೆಯನ್ನು ನಂಬುವ ಮತ್ತು ಕಟ್ಟುನಿಟ್ಟಾಗಿ ಅದನ್ನು ಆಚರಿಸುವ ಹಿಂದೂ ಧರ್ಮವು ಸಾಮಾಜಿಕ ಅನ್ಯಾಯದ ಮೂಲ ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು. ಅಸ್ಪೃಶ್ಯತೆಯು ಮಾನವ ಹಕ್ಕುಗಳನ್ನು ಸಾರಾಸಗಟಾಗಿ ನಿರಾಕರಿಸುವುದರಿಂದ ಅದು ಒಂದು ಅಪರಾಧ ಎಂಬುದು ಅಂಬೇಡ್ಕರರ ಖಚಿತವಾದ ವಾದವಾಗಿತ್ತು. ಗಾಂಧೀಜಿ ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಯನ್ನು ವಿರೋಧಿಸದಿದ್ದರೂ ಅವರು ಅಸ್ಪೃಶ್ಯತೆಯನ್ನು ಪಾಪವೆಂದು ಪರಿಗಣಿಸಿದರು.
ಅಂಬೇಡ್ಕರ್ ಅವರ ಕೆಲಸವು ಅಸ್ಪೃಶ್ಯ ಸಮಾಜದ ಸಂಘಟನೆಯೊಂದಿಗೆ ಪ್ರಾರಂಭವಾಯಿತು. ಅಸ್ಪೃಶ್ಯರು ದೇವಾಲಯಗಳಿಗೆ ಪ್ರವೇಶಿಸುವುದನ್ನು ನಿಷೇಧಿಸ ಲಾಗಿತ್ತು. ಇದಲ್ಲದೆ, ಅಸ್ಪೃಶ್ಯರು ಸಾರ್ವಜನಿಕ ಬಾವಿಗಳಿಂದ ನೀರು ಸೇದಲು ಅನುಮತಿಸಲಾಗಿರಲಿಲ್ಲ. ಈ ಪದ್ಧತಿಗಳು ಧರ್ಮಕ್ಕೆ ಸಂಬAಧಿಸಿವೆ. ಈ ಅಮಾನವೀಯತೆಯ ವಿರುದ್ಧ ಒಂದು ಚಳುವಳಿಯನ್ನು ಪ್ರಾರಂಭಿಸಲಾಯಿತು. ಬಾಬಾಸಾಹೇಬ್ ಮಹಾರಾಷ್ಟ್ರ ಮತ್ತು ದೇಶಾದ್ಯಂತ ಪ್ರಯಾಣಿಸಿ, ದಲಿತರನ್ನು ಒಗ್ಗೂಡಿಸಿ ಅವರಲ್ಲಿ ಸ್ವಾಭಿಮಾನ ಮತ್ತು ಸ್ವ-ಸಹಾಯದ ಭಾವನೆಗಳನ್ನು ತುಂಬಿದರು. ಅಂಬೇಡ್ಕರ್ ಅವರ ಸಂದೇಶ ಶಿಕ್ಷಣ, ಸಂಘರ್ಷ ಮತ್ತು ಹೋರಾಟವಾಗಿದ್ದಿತು.
ಡಾ. ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಮಹಾಡ್ ಸತ್ಯಾಗ್ರಹವು ಅತಿಶೂದ್ರರ ಹೋರಾಟದ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾದ ಮೇಲ್ಟಾತಿಯ ನಾಯಕರು ಸಹ ಈ ಚಳುವಳಿಯಲ್ಲಿ ಭಾಗಿಯಾಗಿದ್ದರು. ಮಾರ್ಚ್ ೨೦, ೧೯೨೭ರಂದು ಡಾ. ಅಂಬೇಡ್ಕರ ಮಹಾಡ್ ಕೆರೆಯನ್ನು ಪ್ರವೇಶಿಸಿ ನೀರು ಪಡೆಯುವುದರ ಮೂಲಕ ಸಾವಿರಾರು ವರ್ಷಗಳ ಕಟ್ಟುಪಾಡು ಮುರಿದುಹಾಕಿದರು. ನಾಲ್ಕು ವರ್ಣಗಳನ್ನು ಸಮರ್ಥಿಸುವ ‘ಮನುಸ್ಮೃತಿ’ ಯನ್ನು ಡಿಸೆಂಬರ್ ೨೫, ೧೯೨೭ರಂದು ಸುಟ್ಟುಹಾಕಲಾಯಿತು. ಅದೇ ವೇಳೆಗೆ ಅಸ್ಪೃಶ್ಯ ದಮನಿತ ತಳ ಸಮುದಾಯಗಳ ಅಭ್ಯುದಯಕ್ಕಾಗಿ ಮಹಾಡ್ ಪರಿಷತ್ ಪ್ರಾರಂಭವಾಯಿತು. ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಲು ಆಸಕ್ತಿ ಹೊಂದಿರುವ ಜನರು ಪ್ರಸ್ತುತ ಪರಿಷತ್ತಿಗಾಗಿ ಮಹಾರಾಷ್ಟ್ರದಾದ್ಯಂತ ಒಟ್ಟುಗೂಡಿದರು.
ಅಲ್ಲಿ ಸ್ಥಾಪಿಸಲಾದ ಮಂಟಪದಾದ್ಯಂತ ವಿಭಿನ್ನ ಘೋಷಣೆಗಳನ್ನು ಬರೆಯಲಾಗಿತ್ತು. ಆ ಸಮಯದಲ್ಲಿ ಬಾಬಾಸಾಹೇಬ್ ಅಹಿಂಸಾತ್ಮಕ ಸತ್ಯಾಗ್ರಹವನ್ನು ಆದರ್ಶವೆಂದು ಪರಿಗಣಿಸಿ ಅಹಿಂಸಾತ್ಮಕ ಹೋರಾಟಕ್ಕೆ ತಮ್ಮನ್ನು ಸಜ್ಜುಗೊಳಿಸಿಕೊಂಡರು. ಡಾ. ಅಂಬೇಡ್ಕರರ ಅಹಿಂಸಾತ್ಮಕ ಹೋರಾಟದ ಹಿಂದೆ ಬುದ್ಧನ ತತ್ವಗಳ ಪ್ರಭಾವ ವನ್ನು ಗುರುತಿಸಬಹುದು. ಮತ್ತೊಂದೆಡೆ, ಮಹಾಡ್ ನಲ್ಲಿ ನಡೆಯುತ್ತಿದ್ದ ಕ್ರಾಂತಿಯ ಬಗ್ಗೆ ಗಾಂಧೀಜಿ ಎಲ್ಲಿಯೂ ಉಲ್ಲೇಖಿಸಿಲ್ಲ. ಡಾ. ಅಂಬೇಡ್ಕರ ಅವರ ಸಾರ್ವಜನಿಕ ಹೋರಾಟ ಪ್ರಾರಂಭವಾಗಿದ್ದು ೧೯೨೭ರಲ್ಲಿ. ಸೈಮನ್ ಕಮೀಷನ್ ಮುಂದೆ ಒಂದು ಮನವಿಯನ್ನು ಸಲ್ಲಿಸಿ ಭಾರತದ ನಿಮ್ನ ವರ್ಗಗಳನ್ನು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪ್ರತ್ಯೇಕ ಘಟಕವೆಂದು ಪರಿಗಣಿಸಲು ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿದರು. ೧೯೩೦ರಲ್ಲಿ ದುಂಡು ಮೇಜಿನ ಪರಿಷತ್ತಿನಲ್ಲಿ ದಮನಿತ ತಳ ಸಮುದಾಯಗಳನ್ನು ಪ್ರತಿನಿಧಿಸಲು ಡಾ. ಅಂಬೇಡ್ಕರ್‌ರವರನ್ನು ಬ್ರಿಟಿಷ್ ಸರಕಾರ ಆಹ್ವಾನಿಸಿತು.
ಇದು ಗಾಂಧೀಜಿಗೆ ಕಳವಳಕಾರಿಯಾಗಿ ಪರಿಣಮಿಸಿತು. ಏಕೆಂದರೆ ಅವರು ಹಲವಾರು ವರ್ಷಗಳಿಂದ ‘ಹರಿಜನ’ರ ಹಿತೈಷಿಯಂತೆ ಕೆಲಸ ಮಾಡುತ್ತಿದ್ದರು. ಡಾ. ಅಂಬೇಡ್ಕರ ಈಗ ಅಸ್ಪೃಶ್ಯರ ಚಳುವಳಿಯ ಕೇಂದ್ರ ಹಂತಕ್ಕೆ ಬಂದು ನಿಂತಿದ್ದರು. ಅಂಬೇಡ್ಕರ್ ಯಾರು? ಅವರು ಹಿಂದುಳಿದವರ ಪ್ರತಿನಿಧಿಯಾಗಲು ಹೇಗೆ ಸಾಧ್ಯ? ಎಂಬ ವಿಷಯ ಗಾಂಧೀಜಿಯನ್ನು ಯೋಚಿಸುವಂತೆ ಮಾಡಿತು. ಮೊದಲನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಡಾ. ಅಂಬೇಡ್ಕರ ಅವರ ವಾದವನ್ನು ಪುರಸ್ಕರಿಸಿದ ಬ್ರಿಟಿಷ್ ಸರಕಾರ ಮುಸ್ಲಿಮರು, ಸಿಬ್ಬರು ಮತ್ತು ಆಂಗ್ಲೋ ಇಂಡಿಯನ್‌ರಿಗೆ ನೀಡಿದಂತೆ ಕೋಮುವಾರು ಪ್ರಾತಿನಿಧ್ಯವನ್ನು ಭಾರತದ ಅಸ್ಪೃಶ್ಯ – ನಿಮ್ಮ ವರ್ಗಗಳಿಗೂ ನೀಡಲಾಗುವುದೆಂದು ತಾತ್ವಿಕವಾಗಿ ಸರಕಾರ ಒಪ್ಪಿತು.
ಇದರಿಂದ ವಿಚಲಿತರಾದ ಗಾಂಧೀಜಿ ಒಂದು ವೇಳೆ ಪ್ರತ್ಯೇಕ ಚುನಾಯಕಗಳು ಮತ್ತು ಜಂಟಿ ಚುನಾಯಕಗಳು ಜಾರಿಯಾದರೆ ಅಸ್ಪೃಶ್ಯರು ಹಿಂದೂ ಸಮಾಜದಿಂದ ಸಿಡಿದು ಹೋಗಿ ಹಿಂದೂ ಸಮಾಜ ವಿಘಟಿತವಾಗುವುದೆಂದು ಭಾವಿಸಿದರು. ಆದ್ದರಿಂದ ಎರಡನೆಯ ದುಂಡು ಮೇಜಿನ ಸಮ್ಮೇಳನಕ್ಕೆ ಹೊರಡುವ ಮೊದಲು, ಗಾಂಧಿ ಯವರು ಅಂಬೇಡ್ಕರ್ ಅವರನ್ನು ಆಹ್ವಾನಿಸಿದರು. ಆಗಸ್ಟ್ ೧೪, ೧೯೩೧ರಂದು, ಮುಂಬೈನ ಮಣಿ ಭವನದಲ್ಲಿ ಈ ಸಭೆಯನ್ನು ನಿಗದಿಪಡಿಸಲಾಯಿತು, ಇದು ಅತ್ಯಂತ ಕುತೂಹಲದಾಯಕ ಮೊದಲ ಸಭೆಯಾಗಿತ್ತು.
ಈ ಸಭೆಯಿಂದ ಏನಾದರೂ ಸಕಾರಾತ್ಮಕ ವಿಷಯ ಹೊರಬರುತ್ತದೆ ಎಂದು ಬಾಬಾಸಾಹೇಬರು ನಿರೀಕ್ಷಿಸಿದ್ದರು. ಇಬ್ಬರೂ ಸಮಯಕ್ಕೆ ಸರಿಯಾಗಿದ್ದರು. ಯೋಜನೆಯ ಪ್ರಕಾರ ಅಂಬೇಡ್ಕರ್ ಅಲ್ಲಿಗೆ ಸಮಯಕ್ಕೆ ತಲುಪಿದರು, ಆದರೆ ಗಾಂಧಿಯವರು ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಅವರು ಪಾಶ್ಚಿಮಾತ್ಯ ಪತ್ರಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು. ಈ ತಿರಸ್ಕಾರ ಏಕೆ? ಬಾಬಾಸಾಹೇಬರು ಕೋಪಗೊಳ್ಳದಿದ್ದುದೇ ಆಶ್ಚರ್ಯಕರವಾಗಿತ್ತು. ಇದು ಬಹಳ ಹೊತ್ತು ಮೌನವಾಗಿ ನಡೆಯಿತು.
ಕೊನೆಗೆ, ಬಾಬಾಸಾಹೇಬರು ಎದ್ದುನಿಂತು, “ನನಗೆ ಸಮಯವಿಲ್ಲ. ನಾನಿನ್ನು ಬರುತ್ತೇನೆ” ಎಂದು ಹೇಳಿ ಎದ್ದು ಈ ಹೊರಡಲನುವಾದರು. ಅಂಬೇಡ್ಕರ್ ಅವರ ಈ ಪ್ರತಿಕ್ರಿಯೆಯನ್ನು ಕೇಳಿದ ತಕ್ಷಣ, . ಗಾಂಧಿಯವರು ಚರ್ಚೆಗೆ ಅವರ ಬಳಿಗೆ ಬಂದರು. ತಮ್ಮ ಪಾತ್ರವನ್ನು ಪ್ರಸ್ತುತಪಡಿಸುವಾಗ, ಅಂಬೇಡ್ಕರ್, “ಮಿ. ಗಾಂಧಿ ನನಗೆ ಮಾತೃಭೂಮಿ ಎಲ್ಲಿದೆ?” ಎಂದು ಕೇಳಿದರು. ಇದನ್ನು ನಿರೀಕ್ಷಿಸದ ಗಾಂಧೀ ತಬ್ಬಿಬ್ಬಾದರು. ದೇಶದಾದ್ಯಂತ ದಮನಿತ ತಳ ಸಮುದಾಯಗಳಿಗೆ ಧರ್ಮದ ಹೆಸರಿನಲ್ಲಿ ಕುಡಿಯಲು ನೀರು ನಿರಾಕರಿಸಿದ ಈ ದೇಶ ನನ್ನ ದೇಶವೆಂದು ಹೇಗೆ ಕರೆಯಲಿ ಎಂದು ಪ್ರಶ್ನಿಸಿದರು.
ಡಾ. ಅಂಬೇಡ್ಕರ್ ಅವರನ್ನು ಬ್ರಾಹ್ಮಣ ಎಂದು ಗಾಂಧಿಯವರು ತಿಳಿದುಕೊಂಡಿದ್ದರು. ಆಮೇಲೆ ಸತ್ಯ ಗೊತ್ತಾದಾಗ ತಪ್ರೊಪ್ಪಿಕೊಂಡರು. ಅಗರ್ಕರ್ ಮತ್ತು ಭಂಡಾರ್ಕರ್ ಅವರಂತೆಯೇ ಅಂಬೇಡ್ಕರ್ ಕೂಡ ಬ್ರಾಹ್ಮಣ ಎಂದು ಅವರು ನಂಬಿದ್ದರು. ಅಸ್ಪೃಶ್ಯರನ್ನು ಪ್ರತಿನಿಧಿಸುವ ಬ್ರಾಹ್ಮಣರ ಬಗ್ಗೆ ಗಾಂಧಿಗೆ ಆಸಕ್ತಿ ಇರಲಿಲ್ಲ. ಅಂಬೇಡ್ಕರ್ ಅವರ ಜಾತಿಯ ಬಗ್ಗೆ ಗಾಂಧಿಗೆ ತಿಳಿದಿರಲಿಲ್ಲ. ಅಂಬೇಡ್ಕರ್ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಅಂಬೇಡ್ಕರ್ ಹೋದ ನಂತರವೂ ಅವರು ಮೂಕವಿಸ್ಮಿತರಾಗಿ ನಿಂತರು. ಗಾಂಧೀಜಿ ತಮ್ಮ ಸಹಾಯಕ ಮಹಾದೇವಭಾಯಿ ಅವರಿಗೆ “ನಾನು ಇಂದು ದೊಡ್ಡ ತಪ್ಪು ಮಾಡಿದ್ದೇನೆ” ಎಂದು ಒಪ್ಪಿಕೊಂಡರು. ಆದರೆ ಈ ಅನುಭವವು ಗಾಂಧಿಯವರ ಮೇಲಿನ ಅಂಬೇಡ್ಕರ್ ಕೋಪಕ್ಕೆ ಕಾರಣವಾಯಿತು.
ಗಾಂಧಿ ಮತ್ತು ಅಂಬೇಡ್ಕರ್ ನಡುವೆ ತಾತ್ವಿಕ ಸಂಘರ್ಷ : 
ಬ್ರಿಟಿಷ್ ಸರ್ಕಾರವು ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಬ್ಬರು ಮತ್ತು ಆಂಗ್ಲೋ-ಇAಡಿಯನ್ನರAತೆ ದಲಿತರಿಗೂ ಸ್ವತಂತ್ರ ಕ್ಷೇತ್ರಗಳನ್ನು ಘೋಷಿಸಿತು. ೭೧ ಕ್ಷೇತ್ರಗಳಲ್ಲಿ ದಲಿತ ಅಭ್ಯರ್ಥಿಗಳನ್ನು ದಲಿತರೆ ಮತದಾನ ಮಾಡಿ ಆಯ್ಕೆ ಮಾಡಿಕೊಳ್ಳುವ ವಿಧಾನವಿತ್ತು. ಗಾಂಧೀಜಿ ಇದನ್ನು ಎಂದಿಗೂ ಒಪ್ಪಲಿಲ್ಲ. ಇದನ್ನು ಹಿಂದೂಗಳನ್ನು ವಿಭಜಿಸುವ ತಂತ್ರವೆಂದು ಪರಿಗಣಿಸಿ, ಗಾಂಧೀಜಿ ಆಮರಣಾಂತ ಉಪವಾಸವನ್ನು ಘೋಷಿಸಿದರು. ಗಾಂಧೀ ಮತ್ತು ಅಂಬೇಡ್ಕರ್ ಚರ್ಚಿಸಿ ಒಪ್ಪಂದಕ್ಕೆ ಬರಬೇಕು ಎಂದು ಬ್ರಿಟಿಷ್ ಪ್ರಧಾನಿ ಹೇಳಿದರು.
ಸೆಪ್ಟೆಂಬರ್ ೨೦, ೧೯೩೨ರಂದು ಪುಣೆಯ ಯೆರವಾಡ ಜೈಲಿನಲ್ಲಿ ಗಾಂಧಿ ಉಪವಾಸ ಆರಂಭಿಸಿದರು ಮತ್ತು ಸುತ್ತಲೂ ಉದ್ವಿಗ್ನತೆಯ ವಾತಾವರಣ ಸೃಷ್ಟಿ ಯಾಗಿತ್ತು. ಅಂಬೇಡ್ಕರ್ ಮೇಲೆ ಒತ್ತಡ ಹೆಚ್ಚಾಯಿತು. ಅವರನ್ನು ಖಳನಾಯಕರೆಂದು ಬಿಂಬಿಸಲಾಯಿತು ಮತ್ತು ಬೆದರಿಕೆಗೂ ಒಳಗಾದರು. ಪ್ರಪಂಚದ ಗಮನವು ಅಂಬೇಡ್ಕರ್ ಪಾತ್ರದ ಕಡೆಗೆ ಕೇಂದ್ರೀಕೃತವಾಯಿತು. ಹೀಗಾಗಿ ಅಂಬೇಡ್ಕರ್ ಹೇಳಿದರು, “ನಾನು ಚರ್ಚೆಗೆ ಸಿದ್ಧನಿದ್ದೇನೆ, ಆದರೆ ಗಾಂಧೀಜಿ ಹೊಸ ಪ್ರಸ್ತಾಪವನ್ನು ಮಂಡಿಸ ಬೇಕು.” ಆದರೆ ಗಾಂಧೀಜಿಗೆ ಅಂತಹ ಬೇರೆ ಆಯ್ಕೆ ಅಥವಾ ಪ್ರಸ್ತಾಪವಿರಲಿಲ್ಲ. ಡಾ. ರಾಜೇಂದ್ರ ಪ್ರಸಾದ್, ಮದನ್ ಮೋಹನ್ ಮಾಳವೀಯ ಮತ್ತು ಇತರ ನಾಯಕರು ಅಂಬೇಡ್ಕರ್ ಮತ್ತು ಗಾಂಧೀಯವರೊAದಿಗೆ ಮಾತುಕತೆಯನ್ನು ಆರಂಭಿಸಿದರು. ಅಂಬೇಡ್ಕರವರು ಅನಿವಾರ್ಯವಾಗಿ ಪುಣೆ ಒಪ್ಪಂದಕ್ಕೆ ಸಹಿ ಹಾಕಬೇಕಾದ ಸ್ಥಿತಿ ಉಂಟಾಯಿತು. ಆದರೆ ಇಂದಿನ ಮೀಸಲು ಕ್ಷೇತ್ರಗಳ ಸ್ಥಿತಿಗತಿ ನೋಡಿದರೆ ಅಂಬೇಡ್ಕರರು ಎಂಥಾ ಮುನ್ನೋಟ ಹೊಂದಿದ್ದರು ಎನ್ನುವದು ಸ್ಪಷ್ಟವಾಗುತ್ತದೆ.
ಹಿಂದೂ ಧರ್ಮವನ್ನು ಸುಧಾರಿಸುವುದು ಅಸಾಧ್ಯ ಎಂದು ಬಾಬಾಸಾಹೇಬ್ ಹೇಳಿದ್ದರು. ಇದರಿಂದ ಗಾಂಧೀಜಿ ಆಘಾತಕ್ಕೊಳಗಾದರು. ಪುಣೆ ಒಪ್ಪಂದದ ನಂತರ, ಗಾಂಧೀಜಿ ಹರಿಜನ ಸೇವಕ ಸಂಘದ ಮೂಲಕ ಅಸ್ಪೃಶ್ಯತೆಯ ವಿರುದ್ಧ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ನವೆಂಬರ್ ೧೯೩೩ರಿಂದ ಜುಲೈ ೧೯೩೪ರ ವರೆಗೆ ದೇಶಾದ್ಯಂತ ಪ್ರವಾಸ ಮಾಡಿದರು. ಅಸ್ಪೃಶ್ಯತೆಯ ತಡೆಗಟ್ಟುವಿಕೆಗಾಗಿ ೮ ಲಕ್ಷ ರೂ.ಗಳನ್ನು ಸಂಗ್ರಹಿಸಲಾಯಿತು. ಅಂತರ್ಜಾತಿ ವಿವಾಹಗಳ ಬಗ್ಗೆಯೂ ಅವರ ಪಾತ್ರ ಬದಲಾಯಿತು. ಆದಾಗ್ಯೂ, ಈ ಉಪಕ್ರಮವು ನಿರ್ದಿಷ್ಟ ಫಲಿತಾಂಶಗಳನ್ನು ನೀಡುತ್ತಿರಲಿಲ್ಲ. ಗಾಂಧಿಯವರು ಪ್ರಯತ್ನಗಳನ್ನು ಮಾಡುತ್ತಿದ್ದರು, ಆದರೆ ಸುಧಾರಣೆ ಗಳಿಗಾಗಿ ಅವರ ಪ್ರಯತ್ನಗಳಿಗೆ ಹಿಂದೂಗಳ ಬೆಂಬಲ ಸಿಗುತ್ತಿರಲಿಲ್ಲ ಬಾಬಾಸಾಹೇಬರಿಗೂ ಇದು ಚೆನ್ನಾಗಿ ತಿಳಿದಿತ್ತು. ಅದರಲ್ಲೂ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಿದ್ದ ಮೇಲ್ಟಾತಿಗಳು ಗಾಂಧೀಜಿಯವರಿಗೆ ಮುಕ್ತವಾದ ಅವಕಾಶವನ್ನು ನೀಡಲಿಲ್ಲ.
ವಾಸ್ತವವಾಗಿ, ಪುಣೆ ಒಪ್ಪಂದಕ್ಕೆ ಮುನ್ನ, ಗಾಂಧೀಜಿಗೆ ಬಾಬಾಸಾಹೇಬರ ಬಗ್ಗೆ ಸಾಕಷ್ಟು ತಿಳಿದಿರಲಿಲ್ಲ ಮತ್ತು ಅವರ ಸಹಚರರು ಅವರಿಗೆ ಅಂಬೇಡ್ಕರ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಿಲ್ಲ. ಗಾಂಧೀಜಿಯವರ ಉಪವಾಸದ ಸಮಯದಲ್ಲಿಯೇ ಗಾಂಧೀ ಮತ್ತು ಅಂಬೇಡ್ಕರ್ ನಡುವೆ ಮಾತುಕತೆ ಪ್ರಕ್ರಿಯೆ ಪ್ರಾರಂಭವಾಯಿತು. ಅದು ಮೊದಲೇ ಆಗಿದ್ದರೆ, ಗಾಂಧಿ-ಅಂಬೇಡ್ಕರ್ ಸಂಬಂಧದಲ್ಲಿ ಯಾವುದೇ ಕಹಿ ಇರುತ್ತಿರಲಿಲ್ಲ.
ಜೋಗೇಂದ್ರನಾಥ ಮಂಡಲ್ ಮತ್ತು ಮುಸ್ಲಿಮ್ ಮತಗಳ ಸಹಾಯದಿಂದ ಡಾ. ಅಂಬೇಡ್ಕರ್ ಜುಲೈ ೧೯೪೬ರಲ್ಲಿ ಬಂಗಾಳ ಪ್ರಾಂತ್ಯದಿAದ ಸಂವಿಧಾನ ಸಭೆಗೆ ಆಯ್ಕೆಯಾದರು. ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಅವರ ಪಾಂಡಿತ್ಯದಿAದ ಕಾಂಗ್ರೆಸ್ ನಾಯಕರು ಪ್ರಭಾವಿತರಾದರು. ವಿಭಜನೆಯ ನಂತರ, ಬಂಗಾಳದಲ್ಲಿನ ಅಂಬೇಡ್ಕರ್ ಅವರ ಆ ಕ್ಷೇತ್ರವು ಪೂರ್ವ ಪಾಕಿಸ್ತಾನದೊಂದಿಗೆ ವಿಲೀನಗೊಂಡಿತು.
ಜಿನ್ನಾ ಅಂಬೇಡ್ಕರ್ ಅವರನ್ನು ಆಹ್ವಾನಿಸಿದರು. ಆದರೆ ಅವರು ‘ಅಂಬೇಡ್ಕರ್’ ಆಗಿದ್ದರು! ಬಾಬಾಸಾಹೇಬರು ‘ಘಟನಾ ಸಮಿತಿ’ಯಲ್ಲಿರಬೇಕು ಎಂದು ಗಾಂಧೀಜಿ ಒತ್ತಾಯಿಸಿದರು. ಕಾಂಗ್ರೆಸ್ ನಾಯಕರು ಇದಕ್ಕೆ ಸಿದ್ಧರಿರಲಿಲ್ಲ. ಖಂಡಿತ, ಗಾಂಧೀಜಿ ಯವರ ಆಜ್ಞೆಯ ಮೇರೆಗೆ, ಕಾಂಗ್ರೆಸ್ ಜುಲೈ ೧೯೪೭ರಲ್ಲಿ ಮುಂಬೈ ಪ್ರಾಂತ್ಯದಿAದ ಅವರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿತು. ಅಂಬೇಡ್ಕರ್ ಅವರನ್ನು ಮೊದಲ ರಾಷ್ಟ್ರೀಯ ಸಚಿವ ಸಂಪುಟದಲ್ಲಿ ಸೇರಿಸಲು ಗಾಂಧೀಜಿ ನೆಹರೂ ಅವರಿಗೆ ಸೂಚಿಸಿದರು. ಲಾರ್ಡ್ ಮೌಂಟ್ ಬ್ಯಾಟನ್ ಇದನ್ನು ದೃಢಪಡಿಸಿದ್ದಾರೆ.
ಮುಂದಿನ ಇತಿಹಾಸ ಎಲ್ಲರಿಗೂ ತಿಳಿದಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ಗಮನಾರ್ಹ ಕೆಲಸ ಮಾಡಿದರು.
ಅಂಬೇಡ್ಕರ್ ‘ಭಾರತೀಯ ಸಂವಿಧಾನದ ಶಿಲ್ಪಿ’ ಆದರು. ಗಾಂಧಿ ಮತ್ತು ಬಾಬಾಸಾಹೇಬ್ ಕೂಡ ಪರಸ್ಪರ ಸ್ಪೂರ್ತಿ ಪಡೆದಿದ್ದಾರೆ. ಹಿರಿಯ ವಿಚಾರವಾದಿ ರಾವ್ ಸಾಹೇಬ್ ಕಸಬೆ ಅವರು ಇಬ್ಬರೂ ತಮ್ಮ ಪಾತ್ರಗಳನ್ನು ಹಾಗೆಯೇ ಉಳಿಸಿಕೊಂಡರು ಮಾತ್ರವಲ್ಲ, ಆದರೆ ಪರಸ್ಪರ ಸಂಬಂಧ ಹೊಂದಿರುವ ಅನುಭವಗಳೊಂದಿಗೆ ತಮ್ಮ ಪರಿಧಿಯನ್ನು ವಿಸ್ತರಿಸಿದರು ಎಂದು ಹೇಳುತ್ತಾರೆ.
ಗಾಂಧೀಜಿ ಸ್ವಾತಂತ್ರ‍್ಯ ಸಿಕ್ಕ ಬಳಿಕ ಯಾವ ಅಧಿಕಾರಕ್ಕೂ ಆಸೆಪಡದೇ ನಿರುಮ್ಮಳವಾಗಿ ತಮ್ಮ ಪಾಡಿಗೆ ತಾವು ಜನರ ಸಂಕಷ್ಟಗಳ ಪರಿಹಾರಕ್ಕೆ ಒತ್ತು ನೀಡಿದರು. ಕಾಂಗ್ರೆಸ್ ಪಕ್ಷವನ್ನು ಇನ್ನು ಮುಂದೆ ವಿಸರ್ಜಿಸುವಂತೆ ತಿಳಿಸಿದ್ದರು. ಡಾ. ಅಂಬೇಡ್ಕರ ತಮ್ಮ ರಾಜಕೀಯ ಜೀವನದಲ್ಲಿ ನಿರಂತರವಾಗಿ ಗಾಂಧೀ ಮತ್ತು ಕಾಂಗ್ರೆಸ್‌ನ್ನು ಟೀಕಿಸುತ್ತಲೇ ಶೋಷಿತ ಮತ್ತು ದಮನಿತ ತಳ ಸಮುದಾಯಗಳ ಸ್ವಾತಂತ್ರ‍್ಯಕ್ಕಾಗಿ ಮತ್ತು ಅಸ್ಮಿತೆಗಾಗಿ ಹೋರಾಡುತ್ತ ಬಂದಿದ್ದರು. ಎರಡು ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಚಿತಾವಣೆಯಿಂದ ಸೋಲನ್ನು ಅನುಭವಿಸಿದ್ದರು.
ಕಾಂಗ್ರೆಸ್ ಪಕ್ಷ ಅವರಿಗೆ ಮಾಡಿದ ಮೋಸ ಮತ್ತು ಅಪಮಾನ ಸಹಿಸಲಸಾಧ್ಯವಾಗಿ ಪರಿಣಮಿಸಿತ್ತು. ಅವರೆಂದೂ ಕಾಂಗ್ರೆಸ್ ಪರವಾಗಿ ವಕಾಲತ್ತು ವಹಿಸಿದವರಲ್ಲ. ಆದಾಗ್ಯೂ ಡಾ. ಅಂಬೇಡ್ಕರರ ವಿದ್ವತ್ತು ಮತ್ತು ಜ್ಞಾನ ದೇಶದ ಉನ್ನತಿಗಾಗಿ ಅಗತ್ಯವೆಂದರಿತ ಕಾಂಗ್ರೆಸ್ ಪಕ್ಷವು ಅವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನವಭಾರತ ನಿರ್ಮಾಣದಲ್ಲಿ ಡಾ. ಅಂಬೇಡ್ಕರ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿತು. ಅಷ್ಟೇ ಅಲ್ಲ ದೇಶದ ಪ್ರಥಮ ಕಾನೂನು ಮಂತ್ರಿಯಾಗಿಯೂ ನೇಮಿಸಿತು. ಇದರ ಹಿಂದೆ ಗಾಂಧೀಜಿಯವರ ಸಲಹೆ ಮತ್ತು ಸೂಚನೆ ಕೆಲಸ ಮಾಡಿತ್ತೆಂಬುದು ವಾಸ್ತವ. ಡಾ. ಅಂಬೇಡ್ಕರರನ್ನು ಹಿಂದೂ ಕೋಡ್ ಬಿಲ್‌ನ್ನು ರಚಿಸಲು ನೇಮಕ ಮಾಡಲಾಯಿತು. ತಮ್ಮ ಎಲ್ಲ ನಿರಂತರ ಕೆಲಸ ಮತ್ತು ರಾಜಕೀಯ ಚಟುವಟಿಕೆಗಳ ಮಧ್ಯೆಯೂ ಹಿಂದೂ ಕಾನೂನು ಅಧ್ಯಯನವನ್ನು ಅವರು ಕೈಕೊಂಡು ಬಿಲ್ ಅನ್ನು ಸಿದ್ಧಪಡಿಸಲು ಡಾ. ಅಂಬೇಡ್ಕರ ಶ್ರಮಪಟ್ಟರು. ಸದರಿ ಬಿಲ್ ಪಾರ್ಲಿಮೆಂಟ್‌ನಲ್ಲಿ ಡಾ. ಅಂಬೇಡ್ಕರ ಮಂಡಿಸಿದಾಗ ಗಾಂಧೀಜಿಯವರು ಜೀವಂತವಾಗಿರಲಿಲ್ಲ. ಗಾಂಧೀಜಿ ಆ ವೇಳೆಯಲ್ಲಿ ಜೀವಂತವಾಗಿದ್ದಿದ್ದರೆ ಅದರ ಪರಿಸ್ಥಿತಿಯೇ ಬೇರೆ ಇರುತ್ತಿತ್ತೇನೋ. ಪಾರ್ಲಿಮೆಂಟ್‌ನಲ್ಲಿ ಮಸೂದೆ ಅಂಗೀಕೃತವಾಗದ್ದರಿಂದ ಡಾ. ಅಂಬೇಡ್ಕರ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಗಾಂಧೀಜಿ ಅಹಿಂಸಾತ್ಮಕ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದರು. ಹಿಂಸೆಯು Violence begets violence ಆಸ್ತ್ರವನ್ನೇ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅವರು ಬಳಸಿ ಬ್ರಿಟಿಷ್ ಸಾಮ್ರಾಜ್ಯವನ್ನು ದೇಶದಿಂದ ಉಚ್ಚಾಟಿಸಲು ಉಪಯೋಗ ಮಾಡಿದ್ದರು. ಅದು ಬಲಹೀನತೆಯಲ್ಲ. ಬಲಹೀನನ ಅಸ್ತವಲ್ಲ. ಅದು ಬಲವಿರುವವನ ಮೌನ ಅಸ್ತ್ರ. ಗಾಂಧೀಜಿಯ ಅಹಿಂಸಾತ್ಮಕ ಹೋರಾಟವನ್ನೇ ಇಂದು ಪ್ರಪಂಚ ಎದುರು ನೋಡುತ್ತಿದೆ.
ಡಾ. ಅಂಬೇಡ್ಕರ್ ಹಿಂದೂ ಧರ್ಮವನ್ನು ಬಿಟ್ಟು ಯಾವ ಧರ್ಮವನ್ನು ಅಳವಡಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಗಾಂಧೀಜಿ ಆಶ್ಚರ್ಯಪಟ್ಟಿದ್ದರು.
೧೯೫೬ರಲ್ಲಿ, ಬಾಬಾಸಾಹೇಬ್ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧಧರ್ಮವನ್ನು ಅಳವಡಿಸಿಕೊಂಡರು. ಅದನ್ನು ನೋಡಲು ಗಾಂಧೀಜಿ ಆಗ ಇರಲಿಲ್ಲ. ಬಾಬಾಸಾಹೇಬ್ ಬುದ್ಧನ ಚಿಂತನೆಗಳನ್ನು ಅನುಸರಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಗಾಂಧೀಜಿ ಬುದ್ದನಿಂದಲೇ ಶಾಂತಿ, ಅಹಿಂಸೆ ಮತ್ತು ಕರುಣೆಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಗಾಂಧಿ ಅಲ್ಲಿದ್ದರೆ, ಅವರು ಅಂಬೇಡ್ಕರ್ ಅವರೊಂದಿಗೆ ಸೇರಿ ಒಂದೇ ಸ್ವರದಲ್ಲಿ ಹೇಳುತ್ತಿದ್ದರು… ‘ಬುದ್ಧಂ ಶರಣಂ ಗಚ್ಚಾಮಿ!’ ಎಂದು. ಮಹಾತ್ಮಾ ಗಾಂಧಿ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಮತ್ತು ಭಾರತದಲ್ಲಿ ಜನಸಾಮಾನ್ಯರ ಜೀವನವನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಚರ್ಚಿಸಿದರು. ಗಾಂಧಿಯವರು ಜಾತಿ ವ್ಯವಸ್ಥೆಯನ್ನು ಸುಧಾರಿಸಲು ಬಯಸಿದ್ದರು. ಆದರೆ ಅಂಬೇಡ್ಕರ್ ಅದನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಬಯಸಿದ್ದರು.
ಪ್ರಸಕ್ತ ಭಾರತವು ಆರ್ಥಿಕ ಮುಗ್ಗಟ್ಟು, ಕೋಮುವಾದ, ಧಾರ್ಮಿಕ ಮತಾಂಧತೆ, ಜಾತೀಯತೆ, ಬೆಲೆ ಏರಿಕೆ, ನಿರುದ್ಯೋಗ, ಬಡತನ, ಧಾರ್ಮಿಕ ಅಸಹಿಷ್ಣುತೆ, ಲಿಂಚಿಂಗ್, ದೌರ್ಜನ್ಯಗಳಿಂದ ತತ್ತರಿಸುತ್ತಿರುವ ಈ ಸಂದಿಗ್ಧಮಯ ಪರಿಸ್ಥಿತಿಯಲ್ಲಿ ಗಾಂಧೀಜಿಯ ಧಾರ್ಮಿಕ ಸಹಿಷ್ಣುತೆ, ಅಹಿಂಸೆ, ಸರಳ ಜೀವನ ವಿಧಾನ, ಆರ್ಥಿಕ ಸ್ವಾವಲಂಬನೆ, ಗ್ರಾಮ ಪುನರುಜ್ಜಿವನ, ಗುಡಿ ಕೈಗಾರಿಕೆಗಳ ಪುನರುತ್ಥಾನ, ಯಂತ್ರರಹಿತ ಕೃಷಿ, ಸಮುದಾಯ ಅಭಿವೃದ್ಧಿಯಲ್ಲಿ ಸಾಮುದಾಯಿಕ ಪಾಲ್ಗೊಳ್ಳುವಿಕೆ ಯಂತಹ ತತ್ವ-ಸಿದ್ಧಾಂತಗಳು ಹೆಚ್ಚು ಪ್ರಸ್ತುತವೆನ್ನಿಸತೊಡಗಿವೆ.
ಗಾಂಧೀಜಿಯ ಈ ಸಿದ್ಧಾಂತಗಳಿಂದ ಭಾರತ ಬಹು ದೂರ ಸಾಗಿದೆ. ಭಾರತದ ಯಾವುದೇ ಒಂದು ಭಾಗ ತತ್ತರಗೊಂಡರೆ ಅದರ ಬಿಸಿ ದೇಶದೆಲ್ಲೆಡೆ ತಾಗದಿರದು. ಗಾಂಧೀಜಿಯವರ ಸರಳತೆ, ಸತ್ಯ ಮತ್ತು ಅಹಿಂಸೆ, ಸತ್ಯಾಗ್ರಹ, ಅಸಹಕಾರ, ನಾಗರಿಕ ಸಮಾಜ ಪರಿಕಲ್ಪನೆಗಳಿಂದು ತಮ್ಮ ನೈಜ ಅರ್ಥ ಕಳೆದುಕೊಂಡಿವೆ. ಅವುಗಳನ್ನು ಅಪಹಾಸ್ಯ ಮಾಡುವ ಪರಿಸ್ಥಿತಿಗೆ ನಾವಿಂದು ಬಂದು ನಿಂತಿದ್ದೇವೆ. ಗಾಂಧೀಜಿಯ ಬಹುತ್ವ ಭಾರತವು ಕೋಮುವಾದಿ ಶಕ್ತಿಗಳ ಕೈಗೆ ಸಿಕ್ಕು ನಲುಗುತ್ತಿದೆ. ಅವರ ಪರಧರ್ಮ ಸಹಿಷ್ಣುತೆ ಜನರ ಮನಸ್ಸಿನಿಂದ ಮಾಸುವಂತೆ ಮತ್ತು ಧರ್ಮ ಶ್ರೇಷ್ಠತೆಯ ನೆಪದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಮನಿತ ತಳ ಸಮುದಾಯದವರನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿದೆ. ಅದನ್ನು ವಿರೋಧಿಸುವವರ ಮೇಲೆ ದೌರ್ಜನ್ಯವನ್ನು ನಡೆಸುವ ಹಲವು ಗಂಭೀರ ಪ್ರಕರಣಗಳು ದೇಶದಾದ್ಯಂತ ನಡೆಯುತ್ತಿವೆ.
ಪ್ರಕ್ಷುಬ್ಧ ಭಾರತಕ್ಕೆ ಗಾಂಧೀಜಿಯವರ ತತ್ವಗಳು ಅವಶ್ಯವೆಂದೆನ್ನಿಸ ದಿದ್ದರೆ ನಮ್ಮನ್ನು ನಾವೇ ಕೊಂದುಕೊಂಡಂತಲ್ಲವೇ? ಭಾರತ ಉಪಖಂಡವು ತನ್ನೊಡಲೊಳಗೆ ಕಾಪಿಟ್ಟುಕೊಂಡು ಬಂದಿರುವ ಬಹುತ್ವ ಪರಂಪರೆಯೊಂದೇ ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದೆಂಬ ಗಾಂಧೀಜಿ ವಿವೇಕವು ನಮ್ಮನ್ನು ಎಚ್ಚರಿಸುತ್ತಲೇ ಇದೆ.
ಮತಾಂಧರು, ಕೋಮುವಾದಿಗಳು, ಜಾತಿ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿರುವ ಸನಾತನಿಗಳು, ಕಾರ್ಪೊರೇಟ್ ಕಂಪನಿ ನಡೆಸುವ ಹಗಲು ದರೋಡೆಕೋರರ ಪಡೆ ದೇಶವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು ದೇಶ ಒಡೆದು ಹೋಳಾಗುವ ಸ್ಥಿತಿಗೆ ಬಂದು ತಲುಪಿದೆ. ಇಂತಹ ದುರ್ಭರ ಪರಿಸ್ಥಿತಿಯನ್ನು ನೋಡಿ ನಿಷ್ಕ್ರಿಯತೆಯಿಂದ ಇರುವವರು ಮತ್ತು ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳು ಮಾಡಿದ್ದೇ ಸರಿಯೆನ್ನುವ ಮನೋಸ್ಥಿತಿಯ ಜನರಿಂದಾಗಿ ದೇಶದ ಐಕ್ಯತೆಗೆ ಉಂಟಾಗುವ ಅಪಾಯ ದೂರವೇನಿಲ್ಲ. ದೇಶವನ್ನು ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ಮುನ್ನಡೆಸುವ ವಿವೇಕ ಮತ್ತು ಹೃದಯ ವೈಶಾಲ್ಯ ಇಂದು ತುರ್ತಾಗಿ ಬೇಕಾಗಿದೆ. ಅದು ಗಾಂಧೀ ತತ್ವಗಳ ಸಾರವೂ ಹೌದು.
ದೇಶದ ನೆಲ, ಜಲ, ನೈಸರ್ಗಿಕ ಮತ್ತು ಮಾನವ ನಿರ್ಮಿತ ರಾಷ್ಟ್ರೀಯ ಸಂಪತ್ತು ಮತ್ತು ಸಂಪನ್ಮೂಲಗಳು ಯಾರದೋ ಪಾಲಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಅವುಗಳನ್ನು ಎಲ್ಲ ಜನವರ್ಗಗಳಿಗೂ ಸಮಾನವಾಗಿ ಹಂಚಿಕೆ ಮಾಡುವ ಮತ್ತು ಅಭಿವೃದ್ಧಿಯಲ್ಲಿ ಎಲ್ಲರನ್ನು ತೊಡಗಿಸುವ ಅವಕಾಶಗಳನ್ನು ಸಂವಿಧಾನದಲ್ಲಿ ಡಾ. ಅಂಬೇಡ್ಕರ ಅಳವಡಿಸಿ ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಘನತೆಯನ್ನು ಎತ್ತಿ ಹಿಡಿದಿದ್ದಾರೆ.
ದೇಶದ ಎಲ್ಲ ಸವಾಲುಗಳು ಮತ್ತು ಸಮಸ್ಯೆಗಳಿಗೂ ಸಂವಿಧಾನವು ಉತ್ತರ ಹೊಂದಿದೆ ಮಾತ್ರವಲ್ಲ, ದೇಶದ ಎಲ್ಲ ನಾಗರಿಕರ ಹಿತ ಕಾಪಾಡುವದು. ಡಾ. ಅಂಬೇಡ್ಕರ ಪ್ರಭುತ್ವ ಸಮಾಜವಾದಿ ಮಾರ್ಗವನ್ನು ಅನುಸರಿಸಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅದನ್ನು ಕಾಪಾಡುವದು ನಮ್ಮೆಲ್ಲರ ವಿವೇಕವಾಗಿದೆ.
ಕೊನೆಗೆ ದೇಶದ ಹಿತವನ್ನು ಕಾಪಾಡುವ ಗಾಂಧೀಜಿಯ ಸಂತತನ ಮತ್ತು ಡಾ. ಅಂಬೇಡ್ಕರರ ಎಚ್ಚರದ ಚಿಕಿತ್ಸೆಗಳೆರಡೂ ದೇಶವನ್ನು ಕಾಪಾಡಬಲ್ಲವೆಂಬ ನಮ್ಮ ಅರಿವು ಹೆಚ್ಚಾಗಬೇಕಿದೆ.
ಪ್ರಸ್ತುತ ಸಮಾಜೋ- ರಾಜಕೀಯ ವ್ಯವಸ್ಥೆಯಲ್ಲಿ ಗಾಂಧೀಜಿಯನ್ನು ಮತ್ತು ಗಾಂಧೀವಾದವನ್ನು ದೇಶದ್ರೋಹದ ಸಿದ್ಧಾಂತವೆAದು ಬಿಂಬಿಸಲಾಗುತ್ತಿದೆ. ಅದೇ ಸಂದರ್ಭದಲ್ಲಿ ಭಾರತದ ಸಂವಿಧಾನವನ್ನು ನಿರಾಕರಿಸುವುದರ ಮೂಲಕ ಅಂಬೇಡ್ಕರ ಚಿಂತನೆಗಳನ್ನು ಪರೋಕ್ಷವಾಗಿ ಹಿಂದೂ ವಿರೋಧಿ ಚಿಂತನೆಗಳೆAದು ಬಿಂಬಿಸಿ, ಈ ಎರಡೂ ಚಿಂತನಧಾರೆಗಳನ್ನು ಅಪ್ರಸ್ತುತಗೊಳಿಸುವ ಹುನ್ನಾರ ನಡೆಯುತ್ತಿದೆ. ಇಂತಹ ಸಂದಿಗ್ಧಮಯ ಪರಿಸ್ಥಿತಿಯಲ್ಲಿ ಗಾಂಧಿವಾದಿಗಳು ಮತ್ತು ಅಂಬೇಡ್ಕರವಾದಿಗಳು ತಾವು ಎದುರಿಸಬೇಕಾದ ಶಕ್ತಿಗಳು ಯಾವುವೆಂಬುದನ್ನು ಒಗ್ಗೂಡಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಕ್ರಿಯೆಗಿಳಿಯಬೇಕಾಗಿದೆ.
– ಡಾ. ಸದಾಶಿವ ಮರ್ಜಿ, ಧಾರವಾಡ

COMMENTS

WORDPRESS: 0
DISQUS: