ಬೆಂಗಳೂರು: ಮಾಧ್ಯಮಗಳು ಉದ್ರೇಕಗೊಳಿಸುವ ಕೆಲಸ ಮಾಡಬಾರದು. ವಿವೇಕಗೊಳಿಸುವ ಕೆಲಸ ಮಾಡಬೇಕು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಉದ್ರೇಕಗೊಳಿಸುವ ಸುದ್ದಿ ಮಾಧ್ಯಮಗಳಾಗಿ ಪರಿವರ್ತನೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕನ್ನಡ ಪ್ಲಾನೆಟ್ ವಿವೇಕಗೊಳಿಸುವ ಕೆಲಸ ಮಾಡುತ್ತಿದೆ ಎಂದು ಖ್ಯಾತ ಸಾಹಿತಿ, ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಪ್ಲಾನೆಟ್ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಭಾರತ ಸಂವಿದಾನ ಸಂಭ್ರಮ-75, ಕನ್ನಡ ಪ್ಲಾನೆಟ್ ಕಾನ್ ಕ್ಲೇವ್- 2025 ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾಧ್ಯಮಗಳು ಬದಲಾಗಿವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಗೊಳಿಸುವ ಸುದ್ದಿಗಳನ್ನೇ ಪ್ರಚಾರ ಮಾಡಲಾಗುತ್ತಿದೆ. ರಾಜಕೀಯ, ಇಡೀ ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೌದ್ದಿಕ ಬಿಕ್ಕಟ್ಟು ಆವರಿಸಿದೆ. ಚಾನೆಲ್ ಗಳ ಆಂಕರ್ ಗಳು ಪಕ್ಷಗಳ ವಕ್ತಾರರಾಗಿ ಬದಲಾಗಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ಸಂವಾದ ಅಸಾಧ್ಯವಾಗಿದೆ. ವಿಶ್ಲೇಷಣೆ ಹೆಸರಿನಲ್ಲಿ ಎಲ್ಲ ಆಯಾಮಗಳಿಂದಲೂ ದಾಳಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಪ್ಲಾನೆಟ್ ವಿವೇಕ ಮೂಡಿಸುವ ಕೆಲಸ ಮಾಡುತ್ತಿದೆ. ಯಾವುದೇ ಹಂತದಲ್ಲೂ ಉದ್ರೇಕ ಗೊಳಿಸುವ ಕೆಲಸ ಮಾಡುತ್ತಿಲ್ಲ. ಇದಕ್ಕಾಗಿ ಕನ್ನಡ ಪ್ಲಾನೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.