ವಿಜಯಪುರ : ಸಂಘ ಪರಿವಾರ ಕೆಣಕಿದವರು ಉಳಿದಿಲ್ಲ ಎಂಬ ವಿಜಯಪುರ ಸಂಸದರ ಮಾತು ಸತ್ಯ, ಅನೇಕ ವಿಚಾರವಾದಿಗಳ ಹತ್ಯೆ ನಡೆದಿರುವುದನ್ನು ನೋಡಿದರೆ ಸಂಸದ ರಮೇಶ ಜಿಗಜಿಣಗಿ ಅವರ ಹೇಳಿಕೆ ಸತ್ಯ
ವಿಜಯಪುರ : ಸಂಘ ಪರಿವಾರ ಕೆಣಕಿದವರು ಉಳಿದಿಲ್ಲ ಎಂಬ ವಿಜಯಪುರ ಸಂಸದರ ಮಾತು ಸತ್ಯ, ಅನೇಕ ವಿಚಾರವಾದಿಗಳ ಹತ್ಯೆ ನಡೆದಿರುವುದನ್ನು ನೋಡಿದರೆ ಸಂಸದ ರಮೇಶ ಜಿಗಜಿಣಗಿ ಅವರ ಹೇಳಿಕೆ ಸತ್ಯ ಎಂದು ತೋರುತ್ತದೆ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪನ್ಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಲಂಕೇಶ ಸೇರಿದಂತೆ ಅನೇಕ ವೈಚಾರಿಕವಾದಿಗಳ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಮಾತು ಹೇಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ಅವರು ಸಂಘ ಪರಿವಾರದ ನೈಜ ಮುಖವನ್ನು ಬಿಚ್ಚಿಟ್ಟಿದ್ದಾರೆ ಎಂದರು.
ಮದರಸಾಗಳಲ್ಲಿ ಒಂದೇ ಒಂದು ಬಂದೂಕು, ಬಾಂಬ್ ಸಿಕ್ಕಿಲ್ಲ, ಬೇಕಾದರೆ ಅದನ್ನು ಸಾಬೀತುಪಡಿಸಿ ಎಂದರು.
ರಾಮಕೃಷ್ಣ ಮಿಷನ್ ೧೮ ನೇ ಶತಮಾನದಲ್ಲಿಯೇ ನೊಂದಣಿಯಾಗಿದೆ, ಸ್ವಾತಂತ್ರ‍್ಯ ಪೂರ್ವವಾಗಿ ಅನೇಕ ಸಂಘಟನೆಗಳು ನೊಂದಣಿಯಾಗಿವೆ, ಆದರೆ ಸಂಘ ಪರಿವಾರ ಏಕೆ ನೊಂದಣಿಯಾಗಿಲ್ಲ ಎಂದರು.
ಸಂಘ ಪರಿವಾರ ಹಿಂಬಾಗಿಲ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಬೆಲೆ ಬಾಳುವ ಜಮೀನು ಸರ್ಕಾರದಿಂದ ಪಡೆದುಕೊಂಡಿದೆ, ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಗಣಿಹಾರ ಒತ್ತಾಯಿಸಿದರು.
೪೦೦ ಕೋಟಿ ರೂ.ಖರ್ಚು ಮಾಡಿ ಸಂಘ ಪರಿವಾರ ಭವನ ನಿರ್ಮಿಸಿದೆ, ಅದು ಯಾರ ಹೆಸರಿನಲ್ಲಿದೆ, ನೊಂದಣಿಯಾಗಿಲ್ಲ ಎಂದರೆ ಅದು ಖಾಸಗಿ ಆಸ್ತಿಯೇ ಎಂದರು.
ನಿಮ್ಮ ಬಳಿಯೇ ಯಾವ ದಾಖಲೆ ಇಲ್ಲ, ಆದರೆ ಎಸ್.ಐ.ಆರ್. ಪ್ರಕ್ರಿಯೆಗೆ ಪ್ರೇರಣೆ ನೀಡಿ ಇನ್ನೊಬ್ಬರಿಗೆ ದಾಖಲೆ ಕೇಳುತ್ತಿದ್ದಿರಿ ಎಂದರು.
ಎಳು ಜನರು ಸಮಾಗಮಗೊಂಡು ಚಟುವಟಿಕೆ ನಡೆಸಿದರೆ ಅದು ನೊಂದಣಿಯಾಗಬೇಕು, ನೊಂದಣಿ ಕಾನೂನು ಅಸ್ತಿತ್ವದಲ್ಲಿದೆ ಎಂದರು.
ನೊಂದಣಿ ಕಾಯ್ದೆ ಅನ್ವಯ ೧೮ ವರ್ಷ ಮೇಲ್ಪಟ್ಟವರು ಮಾತ್ರ ಸದಸ್ಯರಾಗಿ ನೊಂದಣಿಯಾಗಬೇಕು, ಆದರೆ ಬಾಲಕರನ್ನು ಸಹ ಸಂಘ ಪರಿವಾರದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂಘ ಪರವಾರ ನೊಂದಣಿ ಹಿಂದೇಟು ಹಾಕುತ್ತಿದ್ದಾರೆ, ರಾಜ್ಯದ ಖ್ಯಾತ ಲೇಖಕ ನರಕದ ಗರ್ಭಗುಡಿಯಲ್ಲಿ ಸಂಘ ಪರಿವಾರದ ಕರಾಳ ಮುಖವನ್ನು ಪರಿಚಯಿಸಿದ್ದಾರೆ, ಸಂಘ ಪರಿವಾರದಲ್ಲಿ ಒಡನಾಡಿಯಾಗಿದ್ದ ಎ.ಕೆ. ಸುಬ್ಬಯ್ಯ ಅವರು ಆರ್.ಎಸ್.ಎಸ್. ಅಂತರಂಗದ ಎಂಬ ಪುಸ್ತಕ ದಲ್ಲಿಯೂ ಸಂಘ ಪರಿವಾರದ ಕರಾಳ ಮುಖದ ಪರಿಚಯವಿದೆ ಎಂದರು.
ಸಂಘ ಪರಿವಾರಕ್ಕೆ ಪ್ರಶ್ನೆ ಮಾಡುವ ಅಧಿಕಾರ ಇಲ್ಲ ಎಂಬ ಬಿಜೆಪಿ ನಾಯಕರ ನಿಲುವು ಅತಾರ್ಕಿಕ, ಸಂಘ ಪರಿವಾರ ಚಟುವಟಿಕೆ ರಾಜ್ಯದಲ್ಲಿ ಇರದೇ ಹೋಗಿದ್ದರೆ ಅವರ ನಿಲುವು ಒಪ್ಪಿಕೊಳ್ಳಬಹುದಿತ್ತು, ಆದರೆ ರಾಜ್ಯದಲ್ಲಿ ಸಂಘ ಪರವಾರ ಚಟುವಟಿಕೆಗಳು ನಡೆಯವುದರಿಂದ ಅವರಿಗೆ ಪ್ರಶ್ನೆ ಮಾಡುವ ಸಂಪೂರ್ಣ ಅಧಿಕಾರವಿದೆ. ಕಾನೂನು ವ್ಯಾಪ್ತಿ ಮೀರಿ ವರ್ತಿಸಿಲ್ಲ ಎಂದರು.
ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತಜೀ ಅವರು ಹಿಂದೂ ಧರ್ಮ ನೊಂದಣಿಯಾಗಿಲ್ಲ ಹೀಗಾಗಿ ಆರ್.ಎಸ್.ಎಸ್. ನೊಂದಣಿ ಅವಶ್ಯಕತೆ ಇಲ್ಲಎಂದು ಅಸಂಬದ್ಧ ಹಾಗೂ ಅರಳು ಮರಳು ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ, ಬಂದೂಕು ತರಬೇತಿ, ಲಾಠಿ ತಿರುಗಿಸುವುದು ಯಾವ ರೀತಿಯ ದೇಶಪ್ರೇಮ? ಎಂದು ಪ್ರಶ್ನಿಸಿದರು.
ಅನೇಕ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಂಘ ಪರಿವಾರದ ಸದಸ್ಯರು ಭಾಗಿಯಾಗಿದ್ದರು, ಆದರೆ ಅನೇಕ ಕೇಸುಗಳು ಹಾಗೆಯೇ ಕಾಲಭರ್ಗದಲ್ಲಿ ಹುಗಿದುಹೋದವು. ಸಂಘ ಪರಿವಾರದವರು ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕರೆ ಆತ ಬುದ್ದಿಮಾಂದ್ಯ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ ಎಂದರು.
ಮಾಲೇಗಾಂವ್ ಸ್ಪೋಟದಲ್ಲಿ ಭಾಗಿಯಾದ ಆರೋಪಿಯನ್ನು ಸಂಸದೆಯನ್ನಾಗಿಸುವ ಅವಕಾಶ ಕಲ್ಪಿಸಿದ್ದು ಏಕೆ? ಎಂದರು.
ಮೋದಿ ಕೊಲೆಗಾರ ಎಂದು ಟ್ರಂಪ್ ಸಹ ಹೇಳಿದ್ದಾರೆ, ಸಂಘ ಪರಿವಾರ ಒಂದೇ ಒಂದು ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿದೆಯೇ? ಅದು ಸ್ವಯಂ ಉದ್ಧಾರಕ್ಕಾಗಿ ಮಾಡಿಕೊಂಡ ಸಂಘ ಎಂದರು.
ಮುಖಂಡರಾದ ನಾಗರಾಜ ಲಂಬು ಮಾತನಾಡಿ, ಸಂಘ ಪರಿವಾರದಲ್ಲಿ ಜನಗಣನಮನ ಹಾಡುವುದಿಲ್ಲ, ರಾಷ್ಟ್ರ ಧ್ವಜ ಹಾರಿಸುವುದಿಲ್ಲ ಹಾಗಾದರೆ ಯಾವ ರೀತಿ ದೇಶಭಕ್ತಿ? ಈ ಸಂಘ ಪರಿವಾರ ಲಾಠಿ ಹಿಡಿದು ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು. ಬ್ರಾಹ್ಮಣೇತರರೆಲ್ಲರೂ ಶೂದ್ರರೇ, ಸಚಿವ ಪ್ರಿಯಾಂಕಾ ಖರ್ಗೆ ಅವರ ನೊಂದಣಿ ವಿಷಯ ಬದ್ಧತೆಯಿಂದ ಕೂಡಿದೆ ಎಂದರು.
ಮುಖಂಡ ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


COMMENTS